SRI JAGADGURU SIDDARAMESWARA MAHASAMSTHANA
BHOVI GURUPEETHA
"ಶ್ರೀಮನ್ ನಿರಂಜನ ಜಗದ್ಗುರು ಶ್ರೀ ಶ್ರೀ ಶ್ರೀಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು"
ಭಾರತ ದೇಶ ಹಲವಾರು ದೇಶಗಳಿಗಿಂತ ವಿಶೇಷ. ಕಾರಣವೇನೆಂದರೆ ಆನೇಕ ಸಂತ ಮಹಾಂತರನ್ನು ಕೊಟ್ಟು ತನ್ನನ್ನು ವಿಶ್ವದಲ್ಲಿಯೇ ಆಧ್ಯಾತ್ಮ ಭೂಮಿ, ಪೂಣ್ಯಭೂಮಿ, ಪವಿತ್ರ ಭೂಮಿಯೆಂದು ಕರೆಸಿಕೊಂಡಿದೆ. ಜಗತ್ತು ಕತ್ತಲೆಯಲ್ಲಿ ಇದ್ದಾಗ, ಸೃಷ್ಠಿ ಬುದ್ಧ, ಏಸು, ಪೈಗಂಬರ, ನಾನಕ್, ಮಹಾವೀರರಂತಹ ಸಂತರನ್ನು ಸೃಷ್ಠಿಸಿ ಲೋಕದ ಕತ್ತಲೆಯನ್ನು ಕಳೆಯುವಂತೆ ಮಾಡಿದೆ. ಆದರು ತಮಂಥ ಆವರಿಸುತ್ತಲೇ ಬಂದಿದೆ. ಆದರಲ್ಲೂ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂತಹ ಪ್ರಸಂಗದಲ್ಲಿ ೧೨ನೇ ಶತಮಾನದ ಬಸವಣ್ಣನವರು ಬಂದು ಜಗತ್ತಿಗೆ ಮುಸುಕಿದ ಕತ್ತಲೆಯನ್ನು ಕಳೆದರು. ಪ್ರಕೃತಿಯು ಧರ್ಮದ ಜೊತೆಗೆ ಅಧರ್ಮವನ್ನು ಸೃಷ್ಠಿಮಾಡಿದೆ. ಕಾಲಾನುಕಾಲಗಳಿಂದ ಇವೆರಡರ ಮಧ್ಯೆ ಸಂಘರ್ಷ ನಡೆಯುತ್ತಲೆ ಬಂದಿದೆ. ಅಧರ್ಮ ಸೋಲುತ್ತಲೆ, ಧರ್ಮ ಜಯಿಸುತ್ತಲೆ ಬಂದಿದೆ. ಹಾಗೆಂದ ಮಾತ್ರಕ್ಕೆ ಧರ್ಮಕ್ಕೆ ಸುಲಭವಾಗಿಯೇ ಜಯಸಿಕ್ಕಿದೆ ಎಂದಲ್ಲ. ಒಬ್ಬೊಬ್ಬ ದಾರ್ಶನಿಕರ ಮುಂದಾಳತ್ವದಲ್ಲಿ ಹಲವಾರು ಕ್ರಾಂತಿಗಳ ನಂತರ ಧರ್ಮ ಜಯಿಸಿದೆ. ಇದು ಇಂದಿಗೂ ನಿರಂತರ ನಡೆದು ಬರುತ್ತಲೆ ಇದೆ.
ಭರತ ಭೂಮಿಯಲ್ಲಿ ಪವಿತ್ರನಾಡು ಎಂದೆನಿಸಿಕೊಂಡ ಕನ್ನಡನಾಡಿನಲ್ಲೂ ಆನೇಕರು ಜನಿಸಿದ್ದಾರೆ. ಸಾಮಾಜಿಕ ಧಾರ್ಮಿಕ ಕ್ರಾಂತಿಯನ್ನು ಮಾಡಿದ್ದಾರೆ. ಯಾವುದೇ ದಾರ್ಶನಿಕರು ಹುಟ್ಟಬೇಕಾದರೆ ಅವರಿಗೆ ಕಾಲಮಿತಿ, ಜಾತಿಮತದ ಕಟ್ಟಳೆ ಇರಲಾರದು. ಜಂಗಮಕ್ಕೆ ಜಾತಿಮತಗಳಿಲ್ಲ. ಮಾತಾಪಿತರು ಬಂಧುಬಾಂಧವ್ಯದ ಬಂಧನವಿಲ್ಲ. ಅಂದರೆ ಇವೆಲ್ಲ ಸೂತಕ ಮೀರಿ ನಿಂತವನು ಜಂಗಮನಾಗುತ್ತಾನೆ. ಕೇವಲ ಉಚ್ಚ ಕುಲದಲ್ಲಿ ಜನಿಸಿದ ಮಾತ್ರಕ್ಕೆ ದೊಡ್ಡವರಾಗಲಾರರು. ಮಾಡಿದ ಮಹಾತ್ಕಾರ್ಯದಿಂದ ದೊಡ್ಡವರಾಗುತ್ತಾರೆ. ಜನ್ಮಾಯತೆ ಶೂದ್ರಂ ಸಂಸ್ಕಾರಾಯತೆ ಬ್ರಾಹ್ಮಣಂ ಎಂದು ಹೇಳಲಾಗಿದೆ. ಹಾಗೆ ಕನ್ನಡ ನಾಡಿನ ಪುಣ್ಯ ನಗರಿ ದಾವಣಗೆರೆ ಹರ್ಡೆಕರ ಮಂಜಪ್ಪನಂತವರನ್ನು ಕೊಂಡಜ್ಜಿ ಬಸಪ್ಪನಂತವರನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಂತಹ ಊರಿನಲ್ಲಿ ಸುಸಂಸ್ಕೃತ ಮನೆತನದ ಶರಣ ದಂಪತಿಗಳಾದ ಶರಣ ಹನುಮಂತಪ್ಪ ಹಾಗೂ ಶರಣೆ ಸರೋಜಮ್ಮನವರ ಪುಣ್ಯ ಗರ್ಭದಲ್ಲಿ ೧೮-೦೭-೧೯೮೬ರ ಶುಕ್ರವಾರ ಚಿಜ್ಯೋತಿಯ ಪ್ರಜ್ವಲನವಾಯಿತು. ಆ ಜ್ಯೋತಿಯೇ ಇಂದಿನ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ವಿಶಿಷ್ಟ ಗುಣ, ವಿಶೇಷ ವ್ಯಕ್ತಿತ್ವ ಹೊಂದಿದ ಈ ಬಾಲಕ ಎಲ್ಲರಂತಿರಲಿಲ್ಲ. ವಿಶೇಷ ಗುಣಗಳು ವಿಭಿನ್ನವಾಗಿದ್ದವು. ಹೀಗಿರುವ ತಮ್ಮ ಏಕೈಕ ಸುಪುತ್ರನನ್ನು ತಂದೆ-ತಾಯಿಗಳು ದಾವಣಗೆರೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಕಲಿಯಲು ಶಾಲೆಗೆ ಸೇರಿಸಿದರು. ಆದಾಗಲೇ ಅವರ ಮನೆತನದ ಕುಲಗುರುಗಳಾದ ಲಿಂ.ಶ್ರೀ ಸಿದ್ದರಾಮೇಶ್ವರ ಶಿವಯೋಗಿಗಳು ಇದ್ದು, ತಮ್ಮ ಇಡೀ ಜೀವನವನ್ನು ಬ್ರಹ್ಮಚರ್ಯದಲ್ಲಿ ಕಳೆದು ಆಧ್ಯಾತ್ಮಿಕ ಜೀವನದಲ್ಲಿ ಸೋಲ್ಲಾಪುರದ ಸಿದ್ದರಾಮೇಶ್ವರರನ್ನು ಆರಾಧ್ಯ ದೈವವಾಗಿಸಿಕೊಂಡು ಒಂದು ಮಠವನ್ನು ಕಟ್ಟಿ ಅದರ ಅಧಿಪತಿಯಾಗಿದ್ದರು. ಈ ಪೂಜ್ಯರ ಲಿಂಗ ಹಸ್ತದಿಂದಲೇ ಈ ಬಾಲಕನಿಗೆ ೧೯೯೮ ನವೆಂಬರ್ ತಿಂಗಳಲ್ಲಿ ಲಿಂಗದೀಕ್ಷೆ ಮಾಡಿ ಶ್ರೀ ನಿಜಗುಣೇಶ್ವರ ಸ್ವಾಮಿಗಳೆಂದು ಹೆಸರಿಟ್ಟರು. ನಂತರದ ದಿನಮಾನಗಳಲ್ಲಿ ಇವರ ಬುದ್ಧಿ ಶಕ್ತಿ ವಾಕ್ಚಾತುರ್ಯ ನೋಡಿ ಗುರುಗಳು ಇವನು ಸಾಮಾನ್ಯನಲ್ಲ. ಇವನಲ್ಲಿ ಆಗಾಧೆ ಪ್ರತಿಭೆ ಇದೆ. ಇದಕ್ಕೆ ನೀರೆರೆದು ಬೆಳೆಸಬೇಕು ಎಂದು ಚಿತ್ರದುರ್ಗದ ಮುರುಘಾಮಠದ ಜಗದ್ಗುರು ಶಿವಮೂರ್ತಿ ಮುರುಘಾರಾಜೇಂದ್ರ ಶ್ರೀಗಳ ಕೃಪೆಯಿಂದ ತಮ್ಮ ಪಟ್ಟಾಧಿಕಾರದ ದಿನಂದಂದೇ ಬಾಲಯತಿಗಳಿಗೆ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯಂದು ನಾಮಕರಣ ಅಭಿದಾನಿಸಿ ಅವರಿಗೆ ಲಾಂಚನ ಧೀಕ್ಷೆಯನ್ನು ಚಿತ್ರದುರ್ಗದ ಜಗದ್ಗುರುಗಳಿಂದ ಕೊಡಿಸಿದರು. ಮುಂದೆ ಹೆಚ್ಚಿನ ವ್ಯಾಸಾಂಗಕ್ಕಾಗಿ ಹಾಗೂ ಧಾರ್ಮಿಕ ಸಂಸ್ಕಾರಕ್ಕಾಗಿ ಚಿತ್ರದುರ್ಗದ ಮುರುಘಾಮಠ ಸರ್ವರಿಗೂ ಮುಕ್ತ ಪ್ರವೇಶ ಹಾಗೂ ಧರ್ಮ ಸಂಸ್ಕಾರದ ಅವಕಾಶಗಳನ್ನು ಕಲ್ಪಿಸಿತ್ತು. ಅಲ್ಲಿಗೆ ಇವರನ್ನು ಕರೆದೊಯ್ದು ದಿನಾಂಕ:೦೪-೦೬-೧೯೯೯ ರಂದು ಚಿತ್ರದುರ್ಗದ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರ ಮಾರ್ಗದರ್ಶನದಲ್ಲಿ ಗುರುಕುಲಕ್ಕೆ ಪ್ರವೇಶ ದೊರೆಯಿತು.
ಆಧ್ಯಾತ್ಮ ವಿಷಯಗಳ ಜೊತೆ ಜೊತೆಯಲ್ಲಿ ಪ್ರೌಢ, ಪದವಿಪೂರ್ವ ಹಾಗೂ ಪದವಿಯನ್ನು ಸಂಪಾದಿಸಿದ ಶ್ರೀಗಳು ಪದವೀಧರರಾದರು. ತದನಂತರ ಎಸ್.ಜೆ.ಎಂ. ವಿದ್ಯಾಪೀಠದ ಅಡಿಯಲ್ಲಿ ಸ್ಥಾಪಿತಗೊಂಡ ಬಸವತತ್ವ ಮಹಾವಿದ್ಯಾಲಯದಲ್ಲಿ ಮೂರುವರ್ಷ ಅಧ್ಯಯನಮಾಡಿ ಸಾಧಕ, ಬೋಧಕ, ಸುಧಾರಕ ಪದವಿ ಪಡೆದು ಹನ್ನೊಂದು ವರ್ಷಗಳ ಕಾಲ ಮುರುಘಾ ಮಠದಲ್ಲಿದ್ದು ಹಲವು ಧರ್ಮಗಳ ತೌಲನಿಕ ಅಧ್ಯಯನ ಸಂಪೂರ್ಣಗೊಳಿಸಿದರು. ನಂತರ ಇವರನ್ನು ಅಖಿಲ ಭಾರತ ಭೋವಿ (ವಡ್ಡರ) ಗುರುಪೀಠಕ್ಕೆ ಜಗದ್ಗುರುಗಳಾಗಿ ನೇಮಿಸಿ ೧೫-೦೨-೨೦೦೯ ರಲ್ಲಿ ನಾಡಿನ ಅನೇಕ ಪೂಜ್ಯರ ಸನ್ನಿಧಾನದಲ್ಲಿ ಕರ್ನಾಟಕ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರ ಹಾಗೂ ಮಂತ್ರಿಮಂಡಲದ ಹಲವು ಸದಸ್ಯರ ಸಮಕ್ಷಮದಲ್ಲಿ ಅಖಿಲ ಭಾರತ ಭೋವಿ(ವಡ್ಡರ) ಗುರುಪೀಠದ ಸಂಸ್ಥಾಪನೆಯಾಯಿತು. ಅದಕ್ಕೆ ಇವರೇ ಜಗದ್ಗುರುಗಳಾಗಿ ನೇಮಕಗೊಂಡರು. ಇಂತಹ ಮಹತ್ವಪೂರ್ಣವಾದ ಜವಾಬ್ದಾರಿಯನ್ನು ಹೊತ್ತ ಅನೇಕ ರಚನಾತ್ಮಕ ಕಾರ್ಯಗಳನ್ನು ಕೈಗೊಂಡು ದೊಡ್ಡ ದೊಡ್ಡ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಹಿಂದುಳಿದ ಜನಾಂಗ ಎನ್ನುವ ಪಟ್ಟವನ್ನು ಕಳಚಿಹಾಕಲು ಹಗಲಿರುಳು ದುಡಿಯತೊಡಗಿದರು.
ಕರ್ನಾಟಕವಷ್ಟೇ ಅಲ್ಲದೆ ಭಾರತದ ಉದ್ದಗಲಕ್ಕೂ ಸಂಚಾರಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿ ಯಶಸ್ವಿಯಾದರು. ಇವರ ಈ ಕಿರಿಯ ವಯಸ್ಸಿನ ಹಿರಿಯ ಸಾಧನೆ ನೋಡಿ ಈ ಜನಾಂಗದವರು ಬೆಕ್ಕಸ ಬೆರಗಾದರು. ಯಾರೆ ಬಂದರೂ ಎಂತಹ ಸಮಸ್ಯೆ ಉದ್ಭವಿಸಿದರೂ ತಮ್ಮ ಮುಖದಲ್ಲಿ ಯಾವತ್ತು ಮಂದಹಾಸದ ನಗೆ ಬೀರುತ್ತ ಮನತುಂಬಿ ಮಾತಾಡಿ ಅವರನ್ನು ಶಾಂತಗೊಳಿಸಿ ಸಮಸ್ಯೆ ದೂರಮಾಡುವುದು, ಹಲವಾರು ಯುವಕರನ್ನು ಮುಂದೆ ಮಾಡಿಕೊಂಡು ಅವರಲ್ಲಿರುವ ದುಶ್ಚಟ ದುರ್ಗಣಗಳನ್ನು ದೂರಮಾಡಿದರು. ಕೆಲವರಂತು ಇವರ ವೈಚಾರಿಕ ಮಾತುಗಳಿಂದಲೇ ಪರಿವರ್ತನೆಗೊಂಡರು. ಎಲ್ಲಿಯಾದರು ಜನಾಂಗೀಯ ಗಲಭೆ, ದೊಂಬಿಗಳು ನಡೆದಲ್ಲಿ ಆಯಾ ಗ್ರಾಮಗಳಲ್ಲಿ ಪಾದಯಾತ್ರೆ, ಶಾಂತಿಯಾತ್ರೆ ಮಾಡುವುದರ ಮುಖಾಂತರ ಮನಃಪರಿವರ್ತನೆ ಮಾಡುತ್ತಾ ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಉನ್ನತ ವಿಚಾರಗಳತ್ತ ಧಾಪುಗಾಲು ಹಾಕುತ್ತಾ ಸಮಾಜದ ಉದ್ಧಾರವೇ ನನ್ನ ಉದ್ದಾರವೆಂದು ತಿಳಿದವರು ಪ್ರವಾಹ, ಭೂಕಂಪಗಳು ಘಟಿಸಿದ ಸಂದರ್ಭಗಳಲ್ಲಿ ಸಂತ್ರಸ್ಥರಿಗೆ ಪಾದಯಾತ್ರೆಯ ಮುಖಾಂತರ ಪರಿಹಾರ ಹಾಗೂ ಸಾಂತ್ವನ ಹೇಳಿದವರು. ಅನೇಕ ನಿರ್ಗತಿಕ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕೊಡಿಸಿ ಆಶ್ರಯ ನೀಡಿದವರು. ಭೋವಿ ಜನಾಂಗವಷ್ಟೇ ಅಲ್ಲದೆ ಯಾರೇ ಬಡ ವಿದ್ಯಾರ್ಥಿಗಳು ಬೇರೆ ಬೇರೆ ಸಮಾಜದಿಂದ ಬಂದರೆ ಅವರಿಗೆ ಆಶ್ರಯ ನೀಡಿ ಪ್ರತಿಯೊಬ್ಬರಿಗೂ ಶಿಕ್ಷಣ ಅವಶ್ಯ ಎಂದು ಸಾರಿದರು.;
ಬಸವಾದಿ ಪ್ರಮಥರ ವಿಚಾರಧಾರೆಯನ್ನು ಮೈಗೂಡಿಸಿಕೊಂಡು ಮುಂದುವರೆದು ಶ್ರೀಗಳು ಪ್ರತಿ ಜಿಲ್ಲೆ, ಜಿಲ್ಲೆಗಳಲ್ಲೂ ಶ್ರೀ ಸಿದ್ಧರಾಮೇಶ್ವರ ಸಂದೇಶ ಯಾತ್ರೆ ಮಾಡಿದ್ದಾರೆ.
ಇವರ ಧಾರ್ಮಿಕ ಸಮಾಜೋದ್ಧಾರಕ ಕೆಲಸಗಳನ್ನು ಕಂಡ ಬಾಗಲಕೋಟೆಯ ಶರಣ ಬಸವೇಶ್ವರ ಮಠದ ಲಿಂ.ಶ್ರೀ ಶರಣಬಸವ ಮಹಾಸ್ವಾಮಿಗಳು ಇವರನ್ನು ಕಿರಿಯ ಶ್ರೀಗಳು ಎಂದ ಯಾವತ್ತು ಹೇಳುತ್ತಿದ್ದರು. ಇವರು ಕೂಡಾ ಪ್ರತಿಯೊಂದು ಸಭೆ ಸಮಾರಂಭಗಳಲ್ಲಿ ಅವರನ್ನು ಆಮಂತ್ರಿಸಿ ಗೌರವಿಸಿ ಇವರೆ ನಮ್ಮ ಗುರುಗಳು ಎಂದು ತ್ರಿಕರ್ಣ ಪೂರ್ವಕವಾಗಿ ಒಪ್ಪಿಕೊಂಡಿದ್ದರು. ಇವರ ಅಪ್ಪಣೆ ಇಲ್ಲದೇ ಏನನ್ನು ಮಾಡುತ್ತಿರಲಿಲ್ಲ. ಹೀಗಿರುವಾಗ ಗುರುಗಳು ಆಕಸ್ಮಿಕವಾಗಿ ದಿನಾಂಕ:೦೧-೧೧-೨೦೦೯ ರಂದು ಲಿಂಗೈಕ್ಯರಾದಾಗ ನಾಡಿನ ಪ್ರಮುಖ ಪೂಜ್ಯರುಗಳು ಚಿತ್ರದುರ್ಗದ ಗದುಗಿನ ಸುತ್ತೂರಿನ ಇಲಕಲ್ಲ, ಬಾಲ್ಕಿ, ಕೂಡಲಸಂಗಮ, ವಿಜಾಪೂರದ ಸಿದ್ಧೇಶ್ವರ ಶ್ರೀಗಳು ಹಾಗೂ ಅನೇಕ ಸಮಾಜದ ಧರ್ಮಗುರುಗಳ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಮಂತ್ರಿಮಂಡಲದ ಸದಸ್ಯರು, ಅನೇಕರ ಸಮಕ್ಷಮದಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳೆ ಉತ್ತರಾಧಿಕಾರಿಯಾಗಿ ವಹಿಸಿಕೊಳ್ಳಬೇಕೆಂದು ಸರ್ವಸಮಾಜದ ಗಣ್ಯರೆಲ್ಲರೂ ವಿನಂತಿಸಿಕೊಳ್ಳುತ್ತಾರೆ. ಗುರು ಹಿರಿಯರ ಸಮಾಜದ ಎಲ್ಲಾ ಸದ್ಭಕ್ತರ ಇಚ್ಚೆಯ ಮೇರೆಗೆ ಗುರುಪೀಠದ ಜವಾಬ್ದಾರಿಯನ್ನು ಒಪ್ಪಿಕೊಂಡರು.
ಜವಾಬ್ದಾರಿಯನ್ನು ಒಪ್ಪಿಕೊಂಡ ಶ್ರೀಗಳಿಗೆ ದಿನಾಂಕ:೨೨-೦೮-೨೦೧೦ರ ರವಿವಾರದಿಂದ ಇಲಕಲ್ಲಿನ ಬಸವನಿಷ್ಠರು ಮಾತೃಹೃದಯಿಗಳು ಮಹಾಂತ ಜೋಳಿಗೆಯ ಹರಿಕಾರರು. ನಾಡಿನ ಪ್ರಮುಖ ಮಠಾದೀಶ್ವರರ ಸಮ್ಮಖದಲ್ಲಿ ಹಾಗೂ ಸಮಾಜದ ಹಿರಿಯ ಕಿರಿಯ ರಾಜಕೀಯ ಧುರೀಣರು, ಹಿತೈಷಿಗಳು ಮುಖಂಡರ ನೇತೃತ್ವದಲ್ಲಿ ಲಕ್ಷಾಂತರ ಜನರ ಸಮಕ್ಷಮದಲ್ಲಿ ಶ್ರೀ ಮಹಾಂತ ಅಪ್ಪಂಗಳವರಿಂದ ಶ್ರೀಮನ್ ನಿರಂಜನ ಜಗದ್ಗುರು ಶ್ರೀಶ್ರೀಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳೆಂದು ನಾಮ ಅಭಿದಾನಮಾಡಿ ನಿರಂಜನ ಹಾಗೂ ಚಿನ್ಮಯ ದೀಕ್ಷೆಯ ನೀಡಿ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಅಖಿಲ ಭಾರತ ಭೋವಿ (ವಡ್ಡರ) ಗುರುಪೀಠಕ್ಕೆ ಜಗದ್ಗುರು ಪಟ್ಟಾಧಿಕಾರ ಮಾಡಿದರು.
ಶ್ರೀಗಳು ಪಟ್ಟಾಧಿಕಾರವಹಿಸಿಕೊಂಡ ನಂತರದಲ್ಲಿ ಬಾಗಲಕೋಟೆಯ ಶ್ರೀಮಠದಲ್ಲಿ ಪ್ರತಿ ಮಾಸದಲ್ಲಿ ಅಮವಾಸ್ಯೆಯಂದು ”ಬೆಳಕಿನಡೆಗೆ” ಶ್ರಾವಣಮಾಸ ಪರ‍್ಯಂತಂರ "ಪ್ರವಚನ ಮಾಲಿಕೆ" "ಶಿವರಾತ್ರಿ ಮಹೋತ್ಸವ" ನವೆಂಬರ ತಿಂಗಳಲ್ಲಿ ೨ನೇಯ ಶ್ರಿ ಶರಣ ಬಸವ ಮಹಾಸ್ವಾಮಿಗಳ ಸ್ಮರಣೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ನೇರೆವೇರಿಸಿಕೊಂಡು ಬರುತ್ತಿದ್ದಾರೆ. ೩ ಪ್ರೌಢ ಶಾಲೆಗಳ ಶಿಕ್ಷಣ ಸಂಸ್ಥೆಗಳು, ಬಾಗಲಕೋಟ ದಾವಣಗೆರೆ, ಚಿತ್ರದುರ್ಗದ ಮೂರು ಭಾಗಳಲ್ಲಿ ಅಂದರೆ ಶ್ರೀಮಠದಲ್ಲಿ , ನಗರದಲ್ಲಿ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯಗಳನ್ನು ನಡೆಸುವುದಲ್ಲದೆ ಶ್ರೀಮಠದಲ್ಲಿ ಅನೇಕ ಕೊಠಡಿಗಳನ್ನು ನಿರ್ಮಿಸಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ಧಾರೆ. ಕತ್ತಲೆಯಾಗಿರುವ ಸಮಾಜಕ್ಕೆ ನಕ್ಷತ್ರವಾಗಿ ಬೆಳಕನ್ನು ನೀಡಿ ತೇಜ ಪುಂಜವಾಗಿ ಬೆಳೆಯುತ್ತಿದ್ದಾರೆ. ದಿಕ್ಕುಗೆಟ್ಟ ಸಮಾಜಕ್ಕೆ ಆಶಾಕಿರಣವಾಗಿ ಮುನ್ನಡೆಸುತ್ತಿದ್ದಾರೆ. ನಾಡಿನ ಪ್ರಜ್ಞಾವಂತ ಪೂಜ್ಯರೆಲ್ಲರ ಕೃಪೆಗೆ ಪಾತ್ರರಾಗಿ, ಭಕ್ತರ ಹೃದಯಗೆದ್ದು ಬಾಗಲಕೋಟ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗದಲ್ಲಿ ಮಠ ಪ್ರಾರಂಭಿಸಿ ತಮ್ಮ ಕ್ರಿಯಾಶೀಲತೆ ಮೆರೆದಿದ್ದಾರೆ. ಸಮಾಜದಲ್ಲಿ ಬೇರೂರಿರುವ ಕಂದಾಚಾರ, ಮೂಢನಂಬಿಕೆ, ಅಂಧಶ್ರದ್ಧೆ ದುಶ್ಚಟ, ದುರ್ಗುಣಗಳನ್ನು ಅಳಿಸಿ ಹಾಕಲು ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಇವರು ಕೈಗೊಂಡ ಎಲ್ಲ ಮಹಾಮಣಿಹಕ್ಕೆ ಸಮಾಜದ ಸದ್ಭಕ್ತರು ಹೆಗಲುಕೊಟ್ಟು ಸಹಕರಿಸುತ್ತಿರುವುದು ಅವರ ಸಮರ್ಥತೆಯನ್ನು ಸಾರುತ್ತದೆ.
Call Us: +919900578200 / bhoovigurupeetha@gmail.com / chitradurga